ಜಸ್ಟಿನಿಯನ್ -
ಪೂರ್ವ ರೋಮನ್ (ಬಿeóÁಂಟಿನ್) ಚಕ್ರಾಧಿಪತ್ಯದ ಇಬ್ಬರು ಚಕ್ರವರ್ತಿಗಳ ಹೆಸರು.

ಜಸ್ಟಿನಿಯನ್ I : 483-565. ಜಸ್ಟಿನಿಯನ್ ಮಹಾಶಯನೆಂದು ಈತ ಪ್ರಸಿದ್ಧ. 527-565ರಲ್ಲಿ ಬಿeóÁಂಟಿನ್ ಚಕ್ರವರ್ತಿಯಾಗಿದ್ದ. 483ರಲ್ಲಿ ಇಂದಿನ ಸೋಫಿಯ ನಗರದ ಬಳಿಯಲ್ಲಿ ಇಲೀರಿಯನ್ ಬಡರೈತಕುಟುಂಬದಲ್ಲಿ ಜನಿಸಿದ. ಬಾಲ್ಯದಲ್ಲಿ ಕಾನ್‍ಸ್ಟಾಂಟಿನೋಪಲ್ ನಗರ ಸೇರಿ ಒಳ್ಳೆಯ ಶಿಕ್ಷಣ ಪಡೆದ. ಅಲ್ಲಿ ಇವನ ಚಿಕ್ಕಪ್ಪ 1ನೆಯ ಜಸ್ಟಿನ್ ಉನ್ನತ ದಂಡಾಧಿಕಾರಿಯಾಗಿದ್ದ. 518ರಲ್ಲಿ ಜಸ್ಟಿನನಿಗೆ ಸಾಮ್ರಾಟ ಪದವಿ ದೊರೆಯಿತು. ಅವನಿಗೆ ಮಕ್ಕಳಿರಲಿಲ್ಲವಾದ್ದರಿಂದ ಜಸ್ಟಿನಿಯನನ್ನು ದತ್ತುವಾಗಿ ಸ್ವೀಕರಿಸಿದ. ಜಸ್ಟಿನನ ಎಂಟು ವರ್ಷಗಳ ಆಳ್ವಿಕೆಯಲ್ಲಿ ಜಸ್ಟಿನಿಯನ್ ಹೆಚ್ಚು ಮಹತ್ತ್ವ ಮತ್ತು ಜವಾಬ್ದಾರಿವಹಿಸಿ ಪ್ರಸಿದ್ಧಿಗೆ ಬಂದ. ಜಸ್ಟಿನಿಯನ್ ತೀಯೊಡೋರಳನ್ನು ವಿವಾಹವಾದ. ಜಸ್ಟಿನ್ ಅವನಿಗೆ 525ರಲ್ಲಿ ಸೀಸರ್ ಪದವಿ ಕೊಟ್ಟನಲ್ಲದೆ ತನ್ನ ಕೊನೆಗಾಲದಲ್ಲಿ ಸಹಸಾರ್ವಭೌಮನನ್ನಾಗಿ ನೇಮಿಸಿಕೊಂಡ. ತೀಯೊಡೋರಳಿಗೆ ಆಗಸ್ಟ ಪದವಿ ನೀಡಲಾಯಿತು. 527ರ ಆಗಸ್ಟ್ 1ರಂದು ವೃದ್ಧ ಜಸ್ಟಿನ್ ಮರಣಹೊಂದಿದಾಗ ಜಸ್ಟಿನಿಯನ್ ಕಾನ್‍ಸ್ಟಾಂಟಿನೋಪಲ್‍ನಲ್ಲಿ ಸಿಂಹಾಸನವನ್ನೇರಿದ. ರೋಮನ್ ಸಾಮ್ರಾಜ್ಯದ ಗತವೈಭವವನ್ನು ಮತ್ತೆ ಸ್ಥಾಪಿಸುವುದೂ ಕ್ಯಾತೊಲಿಕ್ ಮತದ ಪ್ರಭಾವವನ್ನು ವಿಸ್ತರಿಸುವುದೂ ಚರ್ಚಿನ ಆಡಳಿತವರ್ಗವನ್ನು ಸುಧಾರಿಸಿ ಒಗ್ಗಟ್ಟನ್ನು ಮೂಡಿಸುವುದೂ ಅವನ ಮುಖ್ಯ ಧ್ಯೇಯಗಳಾಗಿದ್ದವು. ಈ ಧ್ಯೇಯಗಳ ಸಾಧನೆಗಾಗಿ ತನ್ನ ಜೀವಮಾನವಿಡೀ ಕಾರ್ಯೋನ್ಮುಖನಾಗಿದ್ದ. ಸಾಮ್ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿಯಲೋಸುಗ ಅವನು ಅನೇಕ ಯುದ್ಧಗಳಲ್ಲಿ ತೊಡಗಬೇಕಾಯಿತು. ಅಂತೆಯೇ ಸಾಮ್ರಾಜ್ಯದ ಮೇಲ್ಮೆಗಾಗಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದ.

	ಬಿeóÁಂಟಿನ್ ಸಾಮ್ರಾಜ್ಯದ ಗಡಿಗಳು ಪರ್ಷಿಯ ಸಾಮ್ರಾಜ್ಯದವರೆಗೆ ವಿಸ್ತರಿಸಿದ್ದರಿಂದಲೂ ತನ್ನ ಸಾಮ್ರಾಜ್ಯದ ಗಡಿಗಳನ್ನು ಪರ್ಷಿಯ ಆಕ್ರಮಣದಿಂದ ರಕ್ಷಿಸಲೂ ಅವನು ನಿರಂತರವಾಗಿ ಯುದ್ಧ ಮಾಡುತ್ತಿರಬೇಕಾಯಿತು. ಅವನು ಸಿಂಹಾಸನಕ್ಕೆ ಬರುವ ವೇಳೆಗಾಗಲೇ ಪರ್ಷಿಯದೊಡನೆ ಯುದ್ಧ ನಡೆಯುತ್ತಿತ್ತು. ಯುದ್ಧದಲ್ಲಿ ಜಸ್ಟಿನಿಯನನ ಪ್ರಸಿದ್ಧ ಸೇನಾನಿ ಬೆಲಿಸಾರಿಯಸ್ ವಿಶೇಷ ಪರಾಕ್ರಮದಿಂದ ಹೋರಾಡಿ 531ರಲ್ಲಿ ವಿಜಯ ಗಳಿಸಿದ. ಆ ವೇಳೆಯಲ್ಲಿ ಪರ್ಷಿಯದ ದೊರೆ 1ನೆಯ ಕ್ಯಾವಾಡ್ ಮರಣ ಹೊಂದಿದ. ಅವನ ಅನಂತರ ಪಟ್ಟಕ್ಕೆ ಬಂದ 1ನೆಯ ಖುಸ್ರುವು ಜಸ್ಟಿನಿಯನನೊಡನೆ ಶಾಂತಿ ಒಪ್ಪಂದ ಮಾಡಿಕೊಂಡ. ಖುಸ್ರು ಪುನಃ 540ರಲ್ಲಿ ಯುದ್ಧ ಘೋಷಿಸಿದ. ಜಸ್ಟಿನಿಯನ ಸೈನ್ಯಗಳು ಇಟಲಿಯಲ್ಲಿ ಕಾರ್ಯಾಚರಣೆಯಲ್ಲಿದ್ದುದರಿಂದ ಖುಸ್ರು ಸಿರಿಯವನ್ನು ಆಕ್ರಮಿಸಿ ಆಂಟಿಯೋಕ್ ನಗರವನ್ನು ಪಾಳುಗೆಡವಿ ಆರ್ಮೀನೀಯವನ್ನು ಮುತ್ತಿದ. ಪರ್ಷಿಯನರ ಆಕ್ರಮಣವನ್ನು ತಡೆಗಟ್ಟಲು ಜಸ್ಟಿನಿಯನ್ ಪುನಃ ತನ್ನ ನುರಿತ ಸೇನಾನಿಯಾದ ಬೆಲಿಸಾರಿಯಸನನ್ನು ಕಳುಹಿಸಿದ. 542ರ ವೇಳೆಗೆ ಜಸ್ಟಿನಿಯನನ ಸೈನ್ಯಗಳು ಖುಸ್ರುವನ್ನು ಸೋಲಿಸಿದವು. ಅನಂತರ ಐದು ವರ್ಷಗಳ ಶಾಂತಿ ಒಪ್ಪಂದವಾಯಿತು. 551 ಮತ್ತು 555ರಲ್ಲಿ ಈ ಒಪ್ಪಂದವನ್ನು ಮುಂದುವರಿಸಲಾಯಿತು. ಪುನಃ ಬಿeóÁಂಟಿನ್ ಮತ್ತು ಪರ್ಷಿಯ ಸಾಮ್ರಾಜ್ಯಗಳಿಗೆ ಯುದ್ಧ ನಡೆಯಿತು. 560ರ ಸುಮಾರಿನಲ್ಲಿ 50 ವರ್ಷಗಳ ಶಾಂತಿ ಒಪ್ಪಂದವಾಯಿತು. ಪರ್ಷಿಯದ ಗಡಿಗಳಲ್ಲಿ ಕ್ರೈಸ್ತರು ವಾಸವಾಗಿದ್ದ ಸಣ್ಣಪುಟ್ಟ ಪ್ರದೇಶಗಳ ಮೇಲಿನ ಅಧಿಕಾರವನ್ನು ಪರ್ಷಿಯ ತ್ಯಜಿಸಬೇಕಾಯಿತು.

	ಸಾಮ್ರಾಜ್ಯದ ಪಶ್ಚಿಮ ಭಾಗದಲ್ಲಿ ತನ್ನ ಹಿಂದಿನ ಸಾಮ್ರಾಟರ ಕಾಲದಲ್ಲಿ ಕೈಬಿಟ್ಟು ಹೋಗಿದ್ದ ಪ್ರದೇಶಗಳ ಮೇಲೆ ಪುನಃ ಅಧಿಕಾರ ಸ್ಥಾಪಿಸಲು ಜಸ್ಟಿನಿಯನ್ ನಿರ್ಧರಿಸಿದ. ಆ ಪ್ರದೇಶಗಳಲ್ಲಿ ಪ್ರಬಲರಾಗಿದ್ದ ಬರ್ಬರರಿಂದ ಅಲ್ಲಿಯ ಕ್ರೈಸ್ತರಿಗೆ ಆತಂಕವಾಗಿತ್ತು. ಆದ್ದರಿಂದ 533ರಲ್ಲಿ ಬೆಲಿಸಾರಿಯಸನ ನಾಯಕತ್ವದಲ್ಲಿ ಆಫ್ರಿಕದ ಉತ್ತರ ಭಾಗವನ್ನು ಆಕ್ರಮಿಸಲು ಜಸ್ಟಿನಿಯನ್ ಸೈನ್ಯ ಕಳುಹಿಸಿದ. ಅಲ್ಲಿಯ ದೊರೆ ಗೆಲಿಮರ್ 534ರಲ್ಲಿ ಜಸ್ಟಿನಿಯನನ ಸೇವೆಗೆ ಶರಣಾಗತನಾದ. ಉತ್ತರ ಆಫ್ರಿಕ ಪುನಃ ಬಿeóÁಂಟಿನ್ ಸಾಮ್ರಾಜ್ಯದ ಭಾಗವಾಯಿತು. ಆಡಳಿತ ದೃಷ್ಟಿಯಿಂದ ಸಾರ್ಡೀನಿಯ, ಕಾರ್ಸಿಕ ಮೊದಲಾದ ದ್ವೀಪಗಳನ್ನು ಹೊಸದಾಗಿ ಗೆದ್ದ ಪ್ರದೇಶಗಳೊಡನೆ ವಿಲೀನಗೊಳಿಸಲಾಯಿತು. ಅನಂತರ ಬರ್ಬರ ತಂಡದ ಜನರು ಉತ್ತರ ಆಫ್ರಿಕದಲ್ಲಿ ಅನೇಕ ವೇಳೆ ದಂಗೆಯೆದ್ದರು. ಜಸ್ಟಿನಿಯನ್ ಅವುಗಳನ್ನಡಗಿಸಿ ಅಲ್ಲಿ ವ್ಯವಸ್ಥಿತ ಆಡಳಿತ ಸ್ಥಾಪಿಸಿದ. 552ರಲ್ಲಿ ತನ್ನ ಸೈನೈಗಳನ್ನು ಷೆಸ್ಸøನ್ ದಂಡಯಾತ್ರೆಗಾಗಿ ಕಳುಹಿಸಿ ಸ್ಪೇನಿನ ದಕ್ಷಿಣ ಭಾಗವನ್ನು ಗೆದ್ದು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ.

	ಕಾನ್‍ಸ್ಟಾಂಟಿನೋಪಲ್ ಸರ್ಕಾರದ ಪ್ರತಿನಿಧಿಯಾಗಿ, ಆದರೆ ಬಹುತೇಕ ಸ್ವತಂತ್ರನಂತೆ, ಇಟಲಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಆಸ್ಟ್ರೊಗಾತ್ ತೀಯೊಡೀರ್ 526ರಲ್ಲಿ ಮರಣ ಹೊಂದಿದ. ಅವನಿಗೆ ಗಂಡು ಸಂತಾನ ಇರಲಿಲ್ಲ. ಅನಂತರ ಅಲ್ಲಿ ಬಿeóÁಂಟಿನ್ ವಿರುದ್ಧ ಚಟುವಟಿಕೆಗಳು ಹೆಚ್ಚಿದುವು. ಈ ಕಾರಣವನ್ನು ಮುಂದುಮಾಡಿಕೊಂಡು ಜಸ್ಟಿನಿಯನ್ ಇಟಲಿಯ ಮೇಲೆ ಸಾಮ್ರಾಜ್ಯದ ಮೇಲೆ ನೇರ ಅಧಿಕಾರವನ್ನು ಸ್ಥಾಪಿಸಲು ಹವಣಿಕೆ ನಡೆಸಿದ. 535ರ ಸುಮಾರಿನಲ್ಲಿ ಜಸ್ಟಿನಿಯನ ಸೈನ್ಯ ಬೆಲಿಸಾರಿಯಸನ ನೇತೃತ್ವದಲ್ಲಿ ಇಟಲಿಯನ್ನು ಆಕ್ರಮಿಸಿದುವು. ಅಲ್ಲಿಯ ಬಣಗಳ ವಿರೋಧವನ್ನು ಅಡಗಿಸಿ 540ರ ವೇಳೆಗೆ ಅಲ್ಲಿ ಸಾಮ್ರಾಜ್ಯದ ಅಧಿಕಾರವನ್ನು ಸ್ಥಾಪಿಸಲಾಯಿತು. ಆರ್ಥಿಕ ಕ್ಷೋಭೆ ಮತ್ತು ಸಾಮ್ರಾಜ್ಯದ ಅಧಿಕಾರಿಗಳ ದಮನ ನೀತಿಯಿಂದ ಇಟಲಿಯಲ್ಲಿ ಅನೇಕ ಪ್ರತಿರೋಧಗಳು ತಲೆದೋರಿ ಜಸ್ಟಿನಿಯನನ ಅಧಿಕಾರವನ್ನು ಸ್ವಲ್ಪ ಕಾಲ ಕಿತ್ತೊಗೆಯಲಾಗಿತ್ತು. ಆದರೆ 562ರ ವೇಳೆಗೆ ಸಾಮ್ರಾಜ್ಯದ ಸೈನ್ಯಗಳು ಇಟಲಿಯನ್ನು ಪ್ರವೇಶಿಸಿ ಅಲ್ಲಿಯ ನಾಯಕರನ್ನು ಉಗ್ರವಾಗಿ ಶಿಕ್ಷಿಸಿ ಪುನಃ ಸಾಮ್ರಾಜ್ಯದ ಅಧಿಕಾರವನ್ನು ಸ್ಥಾಪಿಸಿದುವು. ಜಸ್ಟಿನಿಯನನ ದಳಪತಿಗಳಲ್ಲೊಬ್ಬನಾದ ನಾರ್ಸೀಸ್ ಇಟಲಿಯ ಆಡಳಿತ ಮುಖ್ಯನಾಗಿ ನೇಮಕಗೊಂಡ. ನಿರಂತರವಾದ ಯುದ್ಧಗಳಿಂದ ಇಟಲಿ ಹಾಳಾಯಿತು. ಜಸ್ಟಿನಿಯನ್ ಇಟಲಿಯ ಆರ್ಥಿಕ ಕ್ಷೋಭೆಯನ್ನು ಕೊನೆಗೊಳಿಸಿ ಜನಜೀವನವನ್ನು ಉತ್ತಮಪಡಿಸಲು ಮಾಡಿದ ಪ್ರಯತ್ನಗಳು ಅಷ್ಟು ಸಫಲವಾಗಲಿಲ್ಲ.

	ಉತ್ತರ ಗಡಿಯ ಬಳಿಯ ಸ್ಲಾವ್ ಮತ್ತು ಬಲ್ಗಾರ್‍ಗಳಿಂದ ಆಗಿಂದಾಗ್ಗೆ ತೊಂದರೆಯಾಗುತ್ತಿತ್ತು. ಇವರು ಡ್ಯಾನ್ಯೂಬ್ ನದಿಯನ್ನು ದಾಟಿ ಪೆಲೋಪೊನೀಸ್ ವರೆಗೂ ಬಂದರಲ್ಲದೆ ರಾಜಧಾನಿಯವರೆಗೂ ಮುಂದುವರೆಯುವ ಭೀತಿಯುಂಟಾಗಿತ್ತು. ಇವರಿಂದ ಮುಖ್ಯ ಸ್ಥಳಗಳನ್ನು ರಕ್ಷಿಸಲು ಜಸ್ಟಿನಿಯನ್ ಅನೇಕ ಕೋಟೆಗಳನ್ನು ನಿರ್ಮಿಸಿದ. ಡ್ಯಾನ್ಯೂಬ್ ಪ್ರದೇಶದಲ್ಲಿ ಬಲವಾದ ರಕ್ಷಣಾ ವ್ಯವಸ್ಥೆ ಏರ್ಪಡಿಸಿದ. ಅವನ ದೃಢ ನಿಲುವಿನಿಂದ ಸಾಮ್ರಾಜ್ಯ ಕೊನೆಯ ಪಕ್ಷ ಅರ್ಧ ಶತಮಾನ ಕಾಲ ಸ್ಲಾವ್ ಬಣಗಳ ಆಕ್ರಮಣದಿಂದ ಮುಕ್ತವಾಗಿತ್ತು.

ಮತೀಯ ನೀತಿ : ಜಸ್ಟಿನಿಯನ್ ವಿಶೇಷ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದ. ಚರ್ಚಿನ ಆಡಳಿತ ಸಾಮ್ರಾಟನ ಅಧಿಕಾರದ ಹೊಣೆಗೆ ಒಳಪಟ್ಟಿದ್ದೆಂದು ನಂಬಿದ್ದ. ಚರ್ಚಿನ ಆಡಳಿತವರ್ಗವನ್ನು ತಾನೇ ನೇಮಿಸುತ್ತಿದ್ದ. ತಾತ್ತ್ವಿಕ ಚರ್ಚೆಗೂ ಹೆಚ್ಚು ಗಮನ ನೀಡುತ್ತಿದ್ದ. ಸಾಮ್ರಾಜ್ಯದ ಏಳಿಗೆಗೆ ಆಂತರಿಕ ಶಾಂತಿಯೂ ಮತೀಯ ಒಗ್ಗಟ್ಟೂ ಬಹು ಮುಖ್ಯವೆಂಬುದು ಅವನ ನಂಬಿಕೆ. ಅವನ ಈ ನಂಬಿಕೆಯಿಂದ ಅನೇಕ ಪೇಗನರು ಮತ್ತು ನಾಸ್ತಿಕರು ಉಗ್ರದಂಡನೆಗೆ ಗುರಿಯಾಗಬೇಕಾಯಿತು. ಆತೆನ್ಸ್‍ನ ಪ್ರಸಿದ್ಧ ತತ್ತ್ವಶಾಸ್ತ್ರ ಶಾಲೆಗಳಿಂದ ಪೇಗನ್ ಬೋಧಕರನ್ನು ಉಚ್ಚಾಟನೆ ಮಾಡಿದ. ಸಿರಿಯ, ಪ್ಯಾಲಸ್ಟೀನ್, ಈಜಿಪ್ಟ್ ಮೊದಲಾದ ಪ್ರದೇಶಗಳಲ್ಲಿದ್ದ ಕ್ರೈಸ್ತೇತರರ ವಿಚಾರದಲ್ಲೂ ಪ್ರಾರಂಭದಲ್ಲಿ ಜಸ್ಟಿನಿಯನ್ ಉಗ್ರನೀತಿ ತಳೆದಿದ್ದ. ಅವನ ರಾಣಿಯಾದ ತೀಯೊಡೋರಳ ಪ್ರಯತ್ನಗಳಿಂದ ಜಸ್ಟಿನಿಯನ್ ಕ್ರೈಸ್ತೇತರರಿಗೂ ಮಾನ್ಯತೆ ನೀಡಲು ಮುಂದಾದರೂ ಪೋಪ್ ಅದನ್ನು ವಿರೋಧಿಸಿದ. ಕ್ರೈಸ್ತೇತರರನ್ನು ವಿರೋಧಿಸುವುದರಿಂದ ತನ್ನ ಸಾಮ್ರಾಜ್ಯದ ಪ್ರಾಚ್ಯಭಾಗಗಳು ಬೇರ್ಪಡೆಯಾಗಲು ಅವಕಾಶ ನೀಡಿದಂತಾಗುವುದೆಂದು ಬಗೆದು ಅವರಲ್ಲಿ ಒಂದು ಒಡಂಬಡಿಕೆ ಮೂಡಿಸಲು ಪೋಪ್ ವಿಜಿಲಸನನ್ನು ರೋಮಿನಿಂದ ಕಾನ್‍ಸ್ಟಾಂಟಿನೋಪಲ್‍ಗೆ ಆಹ್ವಾನಿಸಿದ. ಆದರೂ ಜಸ್ಟಿನಿಯನನ ಒಪ್ಪಂದ ಪ್ರಯತ್ನ ಫಲಿಸಲಿಲ್ಲ. ಎರಡು ಪಕ್ಷಗಳಲ್ಲೂ ಒಡಂಬಡಿಕೆಯಾಗಲಿಲ್ಲ. ಅನೇಕ ವರ್ಷಗಳ ಕಾಲ ಪೋಪ್ ಮತ್ತು ಜಸ್ಟಿನಿಯನರ ಮಧ್ಯೆ ಮನಸ್ತಾಪ ಇತ್ತು. ಅವನ ಆಳ್ವಿಕೆಯ ಕೊನೆಗಾಲದಲ್ಲಿ ಅವನು ಮತೀಯ ಗೊಂದಲದಿಂದ ಪಾರಾಗಲು ಯತ್ನಿಸಿದ. ಅದು ಸಾಧ್ಯವಾಗಲಿಲ್ಲ.  

ಕೊನೆಕೊನೆಗೆ ಜಸ್ಟಿನಿಯನ್ ತಮ್ಮ ಧರ್ಮದ ವಿರೋಧಿಯೆಂದು ಚರ್ಚಿನ ಉನ್ನತ ವರ್ಗದವರು ಬಗೆದರು. ಆದರೂ ಜಸ್ಟಿನಿಯನ್ ತನ್ನ ಕೊನೆಗಾಲದವರೆಗೂ ಚರ್ಚಿನ ಆಡಳಿತ ವರ್ಗದ ಮೇಲೆ ಅಧಿಕಾರ ಹೊಂದಿದ್ದ.
ಆಡಳಿತ ನೀತಿ: ಆಡಳಿತದಲ್ಲಿ ತಲೆದೋರಿದ್ದ ಲೋಪದೋಷಗಳನ್ನು ಸರಿಪಡಿಸುವುದು, ಭ್ರಷ್ಟಾಚಾರವನ್ನು ಕೊನೆಗಾಣಿಸುವುದು, ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು, ಸಾಮ್ರಾಜ್ಯದ ಆದಾಯವನ್ನು ದ್ವಿಗುಣಗೊಳಿಸುವುದು, ಕೈಗಾರಿಕೆಗಳನ್ನು ಸ್ಥಾಪಿಸುವುದು, ಸಂಸ್ಕøತಿಸಂವರ್ಧನ ಮೊದಲಾದವು ಜಸ್ಟಿನಿಯನ್ ಚಕ್ರವರ್ತಿ ಮುಖ್ಯ ಆಡಳಿತ ಧೋರಣೆಗಳಾಗಿದ್ದುವು. ಈ ಕಾರ್ಯದಲ್ಲಿ ಅವನ ಸಚಿವರು ಮತ್ತು ಸಿಬ್ಬಂದಿ ವರ್ಗದವರು ಜಸ್ಟಿನಿಯನನ್ನಿಗೆ ತುಂಬಾ ಸಹಕಾರಿಗಳಾಗಿದ್ದರು. ವ್ಯಾಪಾರಕ್ಕೆ ಅವನ ಆಳ್ವಿಕೆಯಲ್ಲಿ ವಿಶೇಷ ಪ್ರೋತ್ಸಾಹ ನೀಡಲಾಯಿತು. ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಮುಖ್ಯವಾಗಿ ರೇಷ್ಮೆ ಕೈಗಾರಿಕೆ ಅವನ ಪ್ರೋತ್ಸಾಹದಿಂದಲೇ ಮೊಟ್ಟ ಮೊದಲ ಬಾರಿಗೆ ಸಾಮ್ರಾಜ್ಯದಲ್ಲಿ ಸ್ಥಾಪಿತವಾಯಿತು. ರೇಷ್ಮೆ ವಸ್ತ್ರಗಳು ಚೀನದಲ್ಲಿ ತಯಾರಾಗಿ ಪರ್ಷಿಯದ ವ್ಯಾಪಾರಿಗಳ ಮೂಲಕ ಸಾಮ್ರಾಜ್ಯಕ್ಕೆ ತಲುಪುತ್ತಿದ್ದವು. ಪರ್ಷಿಯದೊಡನೆ ನಿರಂತರ ಯುದ್ಧಗಳಿಂದ ರೇಷ್ಮೆ ವಸ್ತ್ರಗಳ ಬೆಲೆ ದುಬಾರಿಯಾಗಿ ಹೆಚ್ಚು ಚಿನ್ನ ಹೊರಗೆ ಸಾಗುತ್ತಿತ್ತು. ಇದನ್ನು ತಡೆಗಟ್ಟಲು ಜಸ್ಟಿನಿಯನ್ ತನ್ನ ಸಾಮ್ರಾಜ್ಯದಲ್ಲಿ ರೇಷ್ಮೆ ಉತ್ಪಾದನೆಯನ್ನು ಸ್ಥಾಪಿಸಿದ. ರೇಷ್ಮೆ ಕೈಗಾರಿಕೆಯನ್ನು ಸರ್ಕಾರದ ಹತೋಟಿಗೆ ಒಳಪಡಿಸಿದ್ದರಿಂದ ಸಾಮ್ರಾಜ್ಯದ ಬೊಕ್ಕಸಕ್ಕೆ ಹೇರಳವಾದ ಹಣ ಸಂದಾಯವಾಗುವಂತಾಯಿತು. ಅವನು ಅನೇಕ ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದ. ಸಾಮ್ರಾಜ್ಯದ ಆಡಳಿತ ಹೆಚ್ಚುಮಟ್ಟಿಗೆ ಕೇಂದ್ರೀಕೃತವಾಯಿತು. ಆಡಳಿತದ ಹೆಚ್ಚು ಪಾಲು ಚಕ್ರವರ್ತಿಯ ಸ್ವತಃ ನಿರ್ದೇಶನದಲ್ಲೇ ನಡೆಯುವಂತಾಯಿತು. ಚಕ್ರವರ್ತಿಯ ನೇರ ಆಡಳಿತಕ್ಕೆ ಹಣಕಾಸಿನ ವ್ಯವಹಾರ ಒಳಪಟ್ಟಿತು. ಕಾನ್ಸುಲೇಟ್ ಅಧಿಕಾರ ಕೇವಲ ನಾಮಮಾತ್ರವಾಗಿದ್ದು ಸಾಂಪ್ರದಾಯಿಕವಾಗಿತ್ತು. ಪ್ರಾಂತ್ಯಗಳಲ್ಲಿ ಅದುವರೆಗೂ ಆಚರಣೆಯಲ್ಲಿದ್ದ ದ್ವಂದ್ವ ಆಡಳಿತವನ್ನು ಕೊನೆಗಾಣಿಸಿ, ರಕ್ಷಣಾ ಪಡೆಗಳ ಮತ್ತು ಆಡಳಿತಯಂತ್ರದ ಜವಾಬ್ದಾರಿಯನ್ನು ಒಬ್ಬ ಅಧಿಕಾರಿಗೇ ವಹಿಸಲಾಯಿತು. ಅಧಿಕಾರಿಗಳು ಭ್ರಷ್ಟಾಚಾರಿಗಳಾಗದಂತೆ ಕಟ್ಟುನಿಟ್ಟಾದ ನಿಯಮಗಳನ್ನು ರಚಿಸಲಾಯಿತು.
ಜಸ್ಟಿನಿಯನನ ದಳಪತಿಗಳು ಶೌರ್ಯ ಪರಾಕ್ರಮಗಳಿಂದ ಅವನ ಅನೇಕ ಯುದ್ಧಗಳಲ್ಲಿ ಜಯ ಗಳಿಸಿಕೊಟ್ಟರು. ಕಾನ್‍ಸ್ಟಾಂಟಿನೋಪಲಿನಲ್ಲಿ 532ರಲ್ಲಿ ನಡೆದ ನೀಕ ದಂಗೆಯ ಸಮಯದಲ್ಲಿ ಜಸ್ಟಿನಿಯನನ ಅಧಿಕಾರಪಲ್ಲಟವಾಗಬಹುದೆಂಬ ಸಂದೇಹವಿತ್ತು. ಆದರೆ ಅವನ ದಳಪತಿಗಳಾದ ಬೆಲಿಸಾರಿಯಸ್ ಮತ್ತು ನಾರ್ಸಸರು ದಂಗೆಕೋರರನ್ನು ಹತ್ತಿಕ್ಕಿ ಜಸ್ಟಿನಿಯನನ ಅಧಿಕಾರಕ್ಕೆ ಬಂದೊದಗಿದ್ದ ಗಂಡಾಂತರವನ್ನು ನಿವಾರಿಸಿದರು. ಜಸ್ಟಿನಿಯನ್ ಮಾಡಬೇಕಾಗಿ ಬಂದ ನಿರಂತರವಾದ ಯುದ್ಧಗಳಿಂದಾಗಿ ಶಕ್ತಿಯುತವಾದ ಭೂಸೇನೆ ಮತ್ತು ನೌಕಾದಳವನ್ನು ನಿರ್ಮಿಸಿದ. ಯುದ್ಧಗಳಿಂದಲೂ ಪರರಾಜ್ಯಗಳಿಗೆ ನೀಡಿದ ಸಹಾಯಗಳಿಂದಲೂ ವೈಭವಯುತವಾದ ಕಟ್ಟಡಗಳ ನಿರ್ಮಾಣದಿಂದಲೂ ಅನಾಗರಿಕ ಬಣಗಳ ಹಾವಳಿಯಿಂದಲೂ ಬೊಕ್ಕಸ ಬರಿದಾಯಿತು. ಅದನ್ನು ತುಂಬಲು ಜಸ್ಟಿನಿಯನ್ ಅನೇಕ ಕ್ರಮಗಳನ್ನು ಕೈಗೊಂಡ. ಅಣೆಕಟ್ಟುಗಳನ್ನೂ ಕಾಲುವೆಗಳನ್ನೂ ಸೇತುವೆಗಳನ್ನೂ ಅವನು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸಿದ. ದಾಳಿ ಮತ್ತು ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ಹಾಳಾಗಿದ್ದ ಅನೇಕ ನಗರಗಳನ್ನು ಪುನರ್ ನಿರ್ಮಾಣ ಮಾಡಿಸಿದ. ಸಾಮ್ರಾಜ್ಯದ ಗಡಿಗಳಲ್ಲಿ ಬಲಯುತವಾದ ರಕ್ಷಣೆಯ ಏರ್ಪಾಡು ಮಾಡಿದ. ಸಾಮ್ರಾಜ್ಯದ ನಾನಾಭಾಗಗಳಲ್ಲಿ ಕ್ರೈಸ್ತಮಠಗಳನ್ನೂ ಚರ್ಚುಗಳನ್ನೂ ವಸತಿಗೃಹಗಳನ್ನೂ ನಿರ್ಗತಿಕರಿಗಾಗಿ ಅನ್ನಛತ್ರಗಳನ್ನೂ ಕಟ್ಟಿಸಿದ. ಅವನು ಕಟ್ಟಿಸಿದ ಅನೇಕ ಚರ್ಚುಗಳು ಇಂದಿಗೂ ಉಳಿದುಬಂದಿವೆ. ಅವು ಆಗಿನ ಕಾಲದ ವಾಸ್ತುಶಿಲ್ಪ ಚಾತುರ್ಯದ ಸಾಕ್ಷಿಯಾಗಿವೆ. ಕಾನ್‍ಸ್ಟಾಂಟಿನೋಪಲಿನಲ್ಲಿ ಅವನು ಕಟ್ಟಿಸಿದ ಹೇಗಿಯ ಸೋಫಿಯ ಚರ್ಚು ಇಂದಿಗೂ ಅಲ್ಲಿಯ ಒಂದು ಆಕರ್ಷಕ ಕಟ್ಟಡವಾಗಿ ಉಳಿದಿದೆ. ಅವನು ಕಟ್ಟಿಸಿದ ಸೇಂಟ್ ಸೋಫಿಯ ಚರ್ಚು ಕಾಲಕ್ರಮದಲ್ಲಿ ಮಸೀದಿಯಾಗಿ ಪರಿವರ್ತನೆಗೊಂಡಿತು.

ಕಾನೂನು ಕ್ರೋಡೀಕರಣ: ರೋಮನ್ ಕಾನೂನುಗಳ ಕ್ರೋಡೀಕರಣ ಜಸ್ಟಿನಿಯನನ ಪರಮೋನ್ನತ ಸಾಧನೆಗಳಲ್ಲೊಂದು. ಪ್ರಾಚೀನ ರೋಮನ್ ಗಣರಾಜ್ಯ ಮತ್ತು ಸಾಮ್ರಾಜ್ಯಕಾಲದ ಕಾನೂನುಗಳು, ಸೆನೆಟಿನ ತೀರ್ಪುಗಳು, ನ್ಯಾಯಾಂಗ ತಜ್ಞರ ವಿಮರ್ಶೆಗಳು, ನ್ಯಾಯಾಧಿಪತಿಗಳು ನೀಡಿದ ತೀರ್ಪುಗಳು, ಸಾಮ್ರಾಟರು ಜಾರಿಗೆ ತಂದ ಕಾನೂನುಗಳು ಇವುಗಳ ಕ್ರೋಡೀಕರಣವಿಲ್ಲದೆ ಗೊಂದಲಮಯ ಪರಿಸ್ಥಿತಿಯುಂಟಾಗಿತ್ತು. ರೋಮನ್ ಸಾಮ್ರಾಟರ ಕಾಲದ ಕಾನೂನುಗಳ ಪರಿಶೀಲನೆಗಾಗಿ ಪ್ರಾರಂಭದಲ್ಲಿ ಜಸ್ಟಿನಿಯನ್ ಟ್ರಿಬೋನಿಯನ್ ಎಂಬ ನ್ಯಾಯ ಶಾಸ್ತ್ರಜ್ಞನ ನೇತೃತ್ವದಲ್ಲಿ 10 ಮಂದಿ ಸದಸ್ಯರ ಒಂದು ಸಮಿತಿಯನ್ನು ಸ್ಥಾಪಿಸಿದ. ಈ ಸಮಿತಿ ರೋಮನ್ ಗಣರಾಜ್ಯದ ಆದಿಯಿಂದ ನೀಡಲಾದ ಎಲ್ಲ ತೀರ್ಪುಗಳನ್ನೂ ಜಾರಿಗೆ ತರಲಾದ ಎಲ್ಲ ಕಾನೂನುಗಳನ್ನೂ ಕ್ರೋಡೀಕರಿಸಿತು. ಜಸ್ಟಿನಿಯನ್ ಚಕ್ರವರ್ತಿ ಅಲ್ಲಿಯವರೆಗೂ ಜಾರಿಗೆ ತಂದಿದ್ದ ನಿಬಂಧನೆಗಳನ್ನೂ ಕ್ರೋಡೀಕರಿಸಲಾಯಿತು. ಹನ್ನೊಂದು, ಹನ್ನೆರಡನೆಯ ಶತಮಾನಗಳಲ್ಲಿ ಯೂರೋಪ್ ದೇಶಗಳಲ್ಲಿಯ ನ್ಯಾಯವ್ಯವಸ್ಥೆಗೆ ಜಸ್ಟಿನಿಯನ್ ಸಂಹಿತೆ ಬುನಾದಿಯಾಯಿತು. ಅನಂತರದ ಶತಮಾನಗಳಲ್ಲಿ ಪ್ರಪಂಚದ ಎಲ್ಲ ದೇಶಗಳೂ ತಮ್ಮತಮ್ಮ ದೇಶಗಳ ನ್ಯಾಯನಿಬಂಧನೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ರೀತಿಯಲ್ಲಿ ಜಸ್ಟಿನಿಯನ್ ಸಂಹಿತೆಯಿಂದ ಪ್ರಭಾವಿತವಾಗಿವೆ. ಈ ಸಂಹಿತೆ ಜಸ್ಟಿನಿಯನನ ಅತ್ಯಂತ ಶ್ರೇಷ್ಠ ಸಾಧನೆಯಾಗಿದೆಯೆಂದು ಅನೇಕ ವಿಮರ್ಶಕರು ಜಸ್ಟಿನಿಯನವನ್ನು ಪ್ರಶಂಸಿಸಿದ್ದಾರೆ. 

ವ್ಯಕ್ತಿತ್ವ : ಜಸ್ಟಿನಿಯನ್ ಬಿeóÁಂಟಿನ್ ಸಾಮ್ರಾಜ್ಯದ ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚಿಸಲು ಉತ್ಸುಕನಾಗಿದ್ದ. ಅವನು ಸಮರ್ಥ ಮಂತ್ರಿಗಳನ್ನೂ ದಳಪತಿಗಳನ್ನೂ ಆಯ್ಕೆಮಾಡಿಕೊಂಡಿದ್ದ. ಅವನ ರಾಣಿಯಾದ ತೀಯೊಡೋರ ಉಚ್ಚ ಮನೆತನಕ್ಕೆ ಸೇರಿದವಳಾಗಿರಲಿಲ್ಲ. ಬಾಲ್ಯದಲ್ಲಿ ಅವಳು ಸರ್ಕಸ್ ಮತ್ತು ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದುದರಿಂದ ಅಪಪ್ರಥೆಗೆ ಒಳಗಾಗಿದ್ದಳು. ಅವರ ವಿವಾಹಕ್ಕೆ ಅರಮನೆಯ ವಿರೋಧವಿತ್ತು. ಆದರೂ ಜಸ್ಟಿನಿಯನ್ ಅವಳನ್ನು ಪ್ರೀತಿಸಿ ವರಿಸಿದ. ತೀಯೊಡೋರ ಜಸ್ಟಿನಿಯನನ ಅಚ್ಚುಮೆಚ್ಚಿನ ರಾಣಿಯಾಗಿ ಅವನ ಪ್ರಶಂಸೆಗೆ ಪಾತ್ರಳಾಗಿದ್ದಳು. ಅವರಿಬ್ಬರ ಹೆಸರಿನಲ್ಲಿ ಅನೇಕ ದಾನದತ್ತಿಗಳನ್ನು ಕೊಡಲಾಯಿತು. ಅವಳು ಸುಶಿಕ್ಷಿತಳಲ್ಲದಿದ್ದರೂ ಜಸ್ಟಿನಿಯನ್ ಕೈಗೊಂಡ ನಿರ್ಧಾರಗಳನ್ನು ಕೊನೆಯವರೆಗೂ ದೃಢವಾಗಿ ಮುಂದುವರೆಸುವಂತೆ ಅವಳು ಪ್ರೇರೇಪಿಸುತ್ತ್ತಿದ್ದಳು. ತನ್ನ ಗುರಿಯ ಸಾಧನೆಗಾಗಿ ಜಸ್ಟಿನಿಯನ್ ಹಲವು ವೇಳೆ ಕ್ರೂರವಾಗಿ ವರ್ತಿಸುತ್ತಿದ್ದ. ಅವನು ಮಿತಾಹಾರಿಯಾಗಿದ್ದ. ಶ್ರಮವರಿಯದ ದುಡಿಮೆಗೆ ಹೆಸರಾಗಿದ್ದ. ಅವನು ನಿಸರ್ಗಪ್ರೇಮಿ, ಸೌಂದರ್ಯಪ್ರಿಯ. ಸಂಗೀತ, ಕಲೆ, ಸಾಹಿತ್ಯ, ತತ್ತ್ವ ಮತ್ತು ನ್ಯಾಯದಲ್ಲಿ ಅವನಿಗೆ ವಿಶೇಷ ಅಭಿರುಚಿಯಿತ್ತು. ಪರ್ಷಿಯ ಸಾಮ್ರಾಜ್ಯದಿಂದ ತೋರಿದ್ದ ಬೆದರಿಕೆಯನ್ನು ಅವನು ಹಿಮ್ಮೆಟ್ಟಿಸಿದ. ಆಫ್ರಿಕದ ಉತ್ತರ ಭಾಗವನ್ನು ಮತ್ತು ಇಟಲಿಯನ್ನು ಜಯಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದ. ಅನಾಗರಿಕ ಬಣಗಳ ಹಾವಳಿಯಿಂದ ಸಾಮ್ರಾಜ್ಯವನ್ನು ರಕ್ಷಿಸಿದ. ಅನೇಕ ಸಾರ್ವಜನಿಕ ಕಾಮಗಾರಿಗಳನ್ನೂ ಕಟ್ಟಡಗಳನ್ನೂ ಕಟ್ಟಿಸಿದ. ಜಸ್ಟಿನಿಯನ್ ತನ್ನ 83ನೆಯ ವಯಸ್ಸಿನಲ್ಲಿ 38 ವರ್ಷಗಳ ಆಳ್ವಿಕೆಯ ಅನಂತರ, 565ರಲ್ಲಿ ಮರಣ ಹೊಂದಿದ. ಅವನ ಮರಣಾನಂತರ ಅವನ ಸಹೋದರಿಯ ಮಗನಾದ 2ನೆಯ ಜಸ್ಟಿನ್ ಸಿಂಹಾಸನಕ್ಕೆ ವಾರಸುದಾರನಾಗಿ ಅಧಿಕಾರ ಸ್ವೀಕರಿಸಿದ.

ಜಸ್ಟಿನಿಯನ್ II : 669-711. ಪೂರ್ವ ರೋಮನ್ ಸಾಮ್ರಾಜ್ಯದಲ್ಲಿ ಜಸ್ಟಿನಿಯನ್ ಸಂತತಿಯ ಆಳ್ವಿಕೆಯ ಅನಂತರ ಆರಂಭವಾದ (610) ಹೆರಕ್ಲೈಯಸ್ ಸಂತತಿಯಲ್ಲಿ ಆಳಿದ 4ನೆಯ ಕಾನ್‍ಸ್ಟಂಟೈನ್ ಚಕ್ರವರ್ತಿಯ ಮಗ. 685-695 ಮತ್ತು 705-711ರಲ್ಲಿ ಸಾಮ್ರಾಟನಾಗಿ ಅಧಿಕಾರ ನಡೆಸಿದ. ಅಧಿಕಾರಕ್ಕೆ ಬಂದ ಕೂಡಲೇ ಇವನು ತನ್ನ ಹಿಂದಿನ ಸಾಮ್ರಾಟರ ಯುದ್ಧನೀತಿಯನ್ನು ಮುಂದುವರಿಸಿದ. ಅರಬರೊಂದಿಗೆ ಒಪ್ಪಂದ ಮಾಡಿಕೊಂಡು, ಅವರು ಹೆಚ್ಚು ತೊಂದರೆಕೊಡದಂತೆ ಮಾಡಿದ. ಸೈಪ್ರಸ್, ಆರ್ಮೇನಿಯ ಮತ್ತು ಜಾರ್ಜಿಯ ಪ್ರದೇಶಗಳನ್ನು ಅವರ ಹಿಡಿತದಿಂದ ಪಾರುಮಾಡಿದ. ಮ್ಯಾಸಿಡೋನಿಯದಲ್ಲಿ ಅಧಿಕಾರ ಸ್ಥಾಪಿಸಿದ್ದ ಸ್ಲಾವ್ ಪಂಗಡವನ್ನು 689ರಲ್ಲಿ ಸೋಲಿಸಿದ. ಸ್ಲಾವ್ ಪಂಗಡದ ಜನರಲ್ಲಿ ಹಲವರನ್ನು ಸೈನ್ಯಕ್ಕೆ ಸೇರಿಸಿಕೊಂಡ. ಮತ್ತೆ ಹಲವರನ್ನು ಬಿತಿನಿಯ ಮತ್ತು ಇತರ ಕಡೆಗಳಲ್ಲಿ ವ್ಯವಸಾಯಗಾರರನ್ನಾಗಿ ನಿಯೋಜಿಸಿದ. 692ರ ಸುಮಾರಿನಲ್ಲಿ ಅರಬರು ಜಸ್ಟಿನಿಯನನ ಮೇಲೆ ಯುದ್ಧ ಹೂಡಿದರು. ಸೆಬಾಸ್ಟಪೋಲಿಸ್ ಯುದ್ಧದಲ್ಲಿ ಬಿeóÁಂಟಿನ್ ಪಡೆಗಳು ಸೋತುಹೋದವು. ಆರ್ಮೇನಿಯ ಮೊದಲಾದ ಪ್ರದೇಶಗಳು ಸಾಮ್ರಾಜ್ಯದ ಕೈಬಿಟ್ಟು ಹೋದವು. ಆ ವೇಳೆಗೆ ಸಾಮ್ರಾಜ್ಯದಲ್ಲಿ ಆಂತರಿಕವಾಗಿಯೂ ಅನೇಕ ಕ್ಲಿಷ್ಟ ಸಮಸ್ಯೆಗಳು ತಲೆದೋರಿದುವು. ಮತೀಯ ವಿರಸಗಳು ಉದ್ಭವಿಸಿದುವು. ಜಸ್ಟಿನಿಯನನ ಯುದ್ಧಗಳಿಂದಲೂ ಕಟ್ಟಡ ನಿರ್ಮಾಣಗಳಿಂದಲೂ ಆರ್ಥಿಕ ಮುಗ್ಗಟ್ಟು ತಲೆದೋರಿತ್ತು. ತನ್ನ ಹಣಕಾಸಿನ ಅಧಿಕಾರಗಳಾದ ತಿಯೋಡೋಟಸ್ ಮತ್ತು ಸ್ಟೀಫನರನ್ನು ನಿರ್ದಯೆಯಿಂದ ಸುಲಿಗೆ ಮಾಡಿದ. ಪರಿಣಾಮವಾಗಿ ರಾಜಧಾನಿಯಲ್ಲಿ ಬಂಡಾಯ ಉಂಟಾಯಿತು. 695ರಲ್ಲಿ ಬಂಡಾಯಗಾರರು ಜಸ್ಟಿನಿಯನನ ಮೂಗನ್ನು ಕತ್ತರಿಸಿ ಅವನನ್ನು ದೇಶದಿಂದ ಹೊರಗಟ್ಟಿ ಲಿಯಾನ್ ಷಿಯಸನನ್ನು ಸಿಂಹಾಸನಕ್ಕೆ ತಂದರು.

ಜಸ್ಟಿನಿಯನ್ ಪುನಃ ಚಕ್ರವರ್ತಿ ಪದವಿ ಪಡೆಯಲು ಹವಣಿಸಿದ. ತನ್ನ ಹಿಂದಿನ ಚಕ್ರವರ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಖಾeóÁರರ ಖಾನನ ಬಳಿಗೆ ಹೋಗಿ ಅವನ ಸಹಾಯ ಗಳಿಸಿಕೊಂಡ. ಖಾನನ ಸಹೋದರಿಯನ್ನು ವರಿಸಿ ಅವನ ಮತ್ತು ಬಲ್ಗಾರ್‍ನ ಖಾನನಾಗಿದ್ದ ಟರ್ವೆಲನ ಸಹಾಯದಿಂದ ಸೈನ್ಯ ಕಟ್ಟಿ ಕಾನ್‍ಸ್ಟಾಂಟಿನೋಪಲ್ ನಗರಕ್ಕೆ ಹೋಗಿ ವಿರೋಧಿಗಳನ್ನು ಸೋಲಿಸಿ 705ರಲ್ಲಿ ಪುನಃ ಚಕ್ರವರ್ತಿಯಾದ. ತನಗೆ ಸಹಾಯಮಾಡಿದ ಟರ್ವೆಲನಿಗೆ ವಿಶೇಷವಾಗಿ ಸನ್ಮಾನ ಮಾಡಿ, ವಿರೋಧಿಗಳನ್ನು ಕೊಲ್ಲಿಸಿದ. ಆ ವೇಳೆಗೆ ಪುನಃ ಅರಬರ ದಾಳಿಗಳು ಪ್ರಾರಂಭವಾದುವು. ಅತೃಪ್ತರಾದ ಅಧಿಕಾರಿಗಳೂ ಜನರೂ ಜಸ್ಟಿನಿಯನನಿಗೆ ಎದುರುಬಿದ್ದರು. ಆರ್ಮೇನಿಯನ್ ವೀರನೊಬ್ಬನ ನೇತೃತ್ವದಲ್ಲಿ ಬಂಡೆದ್ದ ಜನರು ಕಾನ್‍ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು ಜಸ್ಟಿನಿಯನ್ ಏಷ್ಯ ಮೈನರ್ ಪ್ರದೇಶದಲ್ಲಿ ಕೊಲೆಯಾದ. ಅವನ ಚಿಕ್ಕ ಮಗ ಟೈಬೀರಿಯಸ್ ಕಾನ್‍ಸ್ಟಾಂಟಿನೋಪಲ್ ನಗರದಲ್ಲಿ ಕೊಲೆಗೆ ಈಡಾದ. ಹೀಗೆ ಅವನ ವಂಶ ಕೊನೆಗೊಂಡಿತು.		(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ